ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ

ಕೆಜಿಎಫ್., ಮಾ. ೧೧ :

ಕೆಜಿಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಾ.೩ ರಂದು ತಡರಾತ್ರಿ ನಡೆದ ಪಿಎಸ್‌ಐ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ತಿಳಿಸಿದ್ದಾರೆ.

ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅಪ್ಪೇನ್‌ನನ್ನು ಬಂಧಿಸಲು ಹೋಗಿದ್ದ ವೇಳೆ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಕುರಿತು ಮಾಹಿತಿ ತಿಳಿಸಿದರು.

ಆರೋಪಿ ಅಪ್ಪೇನ್ ವಿರುದ್ದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ದರೋಡೆ, ಕೊಲೆಯತ್ನ ಪ್ರಕರಣಗಳಲ್ಲಿ ಬೇಕಾಗಿದ್ದರಿಂದ, ತನ್ನ ಸ್ವಂತ ಊರಾದ ಕೆಜಿಎಫ್‌ನಲ್ಲಿ ಇರುವಿಕೆಯ ಮಾಹಿತಿಯೊಂದಿಗೆ, ಮಾ.೩ ರಂದು ತಡರಾತ್ರಿ ಬೆಂಗಳೂರು ಮಹದೇವಪುರ ಠಾಣೆಯ ಪಿಎಸ್‌ಐ ಹರಿನಾಥಬಾಬು ಅವರು ತಮ್ಮ ಸಿಬ್ಬಂದಿಗಳ ಜೊತೆ ಕೆಜಿಎಫ್ ಆಂಡ್ರಸನ್‌ಪೇಟೆಯ ಲೂರ್ದ್‌ನಗರಕ್ಕೆ ಆಗಮಿಸಿ ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಕತ್ತಲಿನಲ್ಲಿ ಕತ್ತಿಯನ್ನು ಪಿಎಸ್‌ಐ ಮೇಲೆ ಬಿಸಾಡಿದಾಗ ಪಿಎಸ್‌ಐ ಹರಿನಾಥಬಾಬು ಅವರ ಎರಡೂ ಕೈಗಳಿಗೆ ಗಾಯಗಳಾಗಿದೆ. ಗಾಯಗೊಂಡ ಹರಿನಾಥಬಾಬು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ಈ ಸಂಬಂಧ ಆರೋಪಿಯ ವಿರುದ್ದ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು.

ಡಿವೈಎಸ್ಪಿ ಬಿ.ಕೆ.ಉಮೇಶ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಅಪರಾಧ ಪತ್ತೆ ತಂಡದ ಸಿಪಿಐ ನಾಗರಾಜ್, ಸಿಬ್ಬಂದಿಗಳಾದ ಮಹೇಂದ್ರ, ಚೇತನ್ ಅವರುಗಳು ತೀವ್ರ ಕಾರ್ಯಾಚರಣೆ ನಡೆಸಿ, ಮಾ.೧೧ ರಂದು ಆರೋಪಿ ಅಪ್ಪೇನ್ ಬಿನ್ ರಾಜಾ (38 ವರ್ಷ), ಲೂರ್ದ್ ನಗರ, ಆಂಡ್ರಸನ್‌ಪೇಟೆ, ಕೆಜಿಎಫ್‌ನ ನಿವಾಸಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಅಪ್ಪೇನ್ ಪಿಎಸ್‌ಐ ಹಲ್ಲೆ ಪ್ರಕರಣದ ನಂತರ ತಪ್ಪಿಸಿಕೊಂಡು ತಮಿಳುನಾಡು, ಆಂದ್ರಪ್ರದೇಶ ಮೊದಲಾದೆಡೆಗಳಲ್ಲಿ ಸುತ್ತಾಡಿ, ಯಾರಿಗೂ ಗುರುತು ಸಿಗಬಾರದೆಂದು ತಿರುತ್ತಣೆಯಲ್ಲಿ ತಲೆಯ ಮುಡಿಕೊಟ್ಟು ಗುಂಡು ಸಹ ಮಾಡಿಸಿಕೊಂಡಿದ್ದು, ಇಂದು ಕೆಜಿಎಫ್‌ಗೆ ಬಂದಿದ್ದ ಸುಳಿವು ದೊರೆತಾಕ್ಷಣ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಬ್ಯಾಂಡ್ ಲೈನಿನ ಲಾಲ್ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *