ಪತ್ರಿಕಾ ಪ್ರಕಟಣೆ – ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಪರಿಶೀಲನೆ

ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಪರಿಶೀಲನೆ

ರಾಜ್ಯ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ನಾಗೇಶ್ ಅವರು ಮಂಗಳವಾರದಂದು ಸಂಜೆ ಕೆಜಿಎಫ್ ಎಸ್‌ಪಿ ಕಛೇರಿಗೆ ಭೇಟಿ ನೀಡಿದ್ದರು.

ಜಿಲ್ಲೆಯಲ್ಲಿ ಕೊರೊನಾ ವೈರಸ್ ಅತೀ ಹೆಚ್ಚು ಹರಡುವಿಕೆಯಿಂದಾಗಿ ಕೆಜಿಎಫ್ ಭಾಗದ ಜನತೆಯು ಇತ್ತೀಚೆಗೆ ಆತಂಕಕ್ಕೆ ಒಳಗಾಗಿದ್ದರಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಅವರು ಭೇಟಿ ನೀಡಿ, ಜನಸಾಮಾನ್ಯರಿಗೆ ಸಾಂತ್ವನಾ ಹೇಳಿ, ಭಯಭೀತರಾಗದಂತೆ ಧೈರ್ಯ ತುಂಬಿದರು. ಬೇತಮಂಗಲ, ಚಿಗರಾಪುರ, ಕೆಜಿಎಫ್ ಅಶೋಕನಗರ, ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ, ಸಂಭ್ರಮ್ ಆಸ್ಪತ್ರೆ ಮೊದಲಾದೆಡೆ, ಕಂಟೈನ್ಮೆಂಟ್ ಜೋನ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕ್ವಾರಂಟೈನ್‌ನಲ್ಲಿರುವವರ ಉಭಯ ಕುಷಲೋಪರಿ ವಿಚಾರಿಸಿದರು. ಯಾವುದೇ ನ್ಯೂನತೆ, ಲೋಪ ದೋಷಗಳಿಗೆ ಆಸ್ಪದ ನೀಡದಂತೆ, ಆಗಿಂದಾಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಮಾವೇಶಗೊಂಡರು. ಕೋವಿಡ್-೧೯ ಬಂದೋಬಸ್ತು ಕರ್ತವ್ಯಗಳನ್ನು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಬರುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಮುಂದೆಯೂ ಸಹ ಅತ್ಯುತ್ತಮ ಸೇವೆಯನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗುವಂತೆ ಕರೆ ನೀಡಿದರು.

ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಲು, ಸಾಬೂನಿನಿಂದ ಆಗಾಗ್ಗೆ ಕೈತೊಳೆಯಲು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು, ಅನಾವಶ್ಯಕ ಓಡಾಡ ಮಾಡದಿರಲು ಮನವಿ ಮಾಡಿದರು. ಎಲ್ಲಾ ನಾಗರೀಕರು ಜವಾಬ್ದಾರಿಯುತವಾಗಿ ನಡೆದುಕೊಂಡು, ಅನಾವಶ್ಯಕ ಓಡಾಟಕ್ಕೆ ಆಸ್ಪದ ನೀಡಬಾರದು, ವಿನಾಕಾರಣ ವಾಹನಗಳಲ್ಲಿ ಓಡಾಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ಆದೇಶಕ್ಕೆ ಬದ್ದರಾಗಿ ಮನೆಯಲ್ಲಿಯೇ ಇದ್ದು ಸುರಕ್ಷಿತರಾಗಿರಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅವರು ಕೋರಿದ್ದಾರೆ.

ಸಚಿವರೊಂದಿಗೆ ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ, ತಹಶೀಲ್ದಾರ್ ರಮೇಶ್, ಪ್ರಭಾರ ಪೌರಾಯುಕ್ತ ಶ್ರೀಧರ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *