ಪತ್ರಿಕಾ ಪ್ರಕಟಣೆ – ಕೆಜಿಎಫ್ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಯಶಸ್ವಿ, ಐಜಿಪಿ ಅವರಿಂದ ಬಹುಮಾನ ವಿತರಣೆ

ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೨೦-೨೧ನೇ ಸಾಲಿನ ಪೊಲೀಸರ ಮತ್ತು ಪೊಲೀಸ್ ಮಕ್ಕಳ ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಯಿತು. ಕೆಜಿಎಫ್‌ನ ಚಾಂಫೀಯನ್‌ರೀಫ್ಸ್‌ನಲ್ಲಿನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ವಾರ್ಷಿಕ ಪೊಲೀಸ್ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಬುಧವಾರದಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಲಯ ಪೊಲೀಸ್ ಮಹಾನಿರೀಕ್ಷಕರಾದ ಎಂ. ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿಜೇತರುಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ವರ್ಷಕ್ಕೊಮ್ಮೆ ನಡೆಯುವ ಪೊಲೀಸ್ ಕ್ರೀಡಾಕೂಟದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿರುವುದು ಸಂತಸ ತಂದಿದೆ, ಕರ್ತವ್ಯದ ಒತ್ತಡದ ನಡುವೆ ಸಿಲುಕಿರುವಂತಹ ಪೊಲೀಸರಿಗೂ ಮನೋರಂಜನೆ, ಕ್ರೀಡೋಲ್ಲಾಸ, ಪರಸ್ಪರ ಸ್ನೇಹ ಬಾಂಧವ್ಯಕ್ಕೆ ಕ್ರೀಡಾಕೂಟವು ಸಹಕಾರಿಯಾಗಿರುತ್ತದೆ. ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯನ್ನು ತೋರ್ಪಡಿಸಲು ಕುಟುಂಬ ಸದಸ್ಯರ ಬೆಂಬಲವು ಅಗತ್ಯವಾಗಿ ಬೇಕಿರುತ್ತದೆ. ಪೊಲೀಸರ ಕುರಿತು ಸಮಾಜದಲ್ಲಿ ಯಾವುದೇ ಕೀಳರಿಮೆ ಕಂಡುಬಾರದಂತೆ ನಡೆದುಕೊಳ್ಳಲು ಕಿವಿಮಾತು ಹೇಳಿದರು. ಅಪರಾಧಗಳು ಹೆಚ್ಚಾಗಲು ಒಂದು ಹಂತದಲ್ಲಿ ನಿರುದ್ಯೋಗ ಸಮಸ್ಯೆಯು ಕಾರಣ, ಉದ್ಯೋಗಾಂಕ್ಷಿಗಳಿಗೆ ಇಂದಿನ ಸಮಾಜದಲ್ಲಿ ಸ್ಪರ್ಧಾತ್ಮಕ ಪೈಪೋಟಿ ಇದ್ದು, ಯಾರೂ ಸಹ ಕೆಟ್ಟದ್ದನ್ನು ಬಯಸದೇ ಒಳ್ಳೆ ಮಾರ್ಗದಲ್ಲಿ ಮುನ್ನಡೆಯಬೇಕೆಂದರು. ಒಳ್ಳೆತನದ ಕರ್ತವ್ಯ ನಿಷ್ಠೆಯನ್ನು ತೋರ್ಪಡಿಸಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಐಜಿಪಿ ಎಂ. ಚಂದ್ರಶೇಖರ್ ಅವರು ಕರೆ ನೀಡಿದರು. ಕ್ರೀಡೆಗಳು ಪ್ರತಿಯೊಬ್ಬರಿಗೂ ಮುಖ್ಯ, ದೈಹಿಕವಾಗಿ, ಮಾನಸಿಕವಾಗಿ, ಶಾಂತಿ, ಸಂಯಮದಿಂದ ಕರ್ತವ್ಯ ನಿರ್ವಹಿಸಲು ಕ್ರೀಡೆಗಳು ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು.

ಕ್ರೀಡಾಕೂಟಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಅಧ್ಯಕ್ಷತೆ ವಹಿಸಿದ್ದು, ಪೊಲೀಸರು ಕಾನೂನು ಸುವ್ಯವಸ್ಥೆ ಅಡಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಮಧ್ಯೆ ಮನೋವಿಕಾಸಕ್ಕಾಗಿ ವರ್ಷಕ್ಕೊಮ್ಮೆ ಕ್ರೀಡಾಕೂಟವನ್ನು ನಡೆಸುತ್ತಿದ್ದು, ಪ್ರಸ್ತುತ ಕೆಜಿಎಫ್‌ನಲ್ಲಿ ಮೂರು ದಿನಗಳ ಕಾಲ ನಡೆದ ಪೊಲೀಸ್ ಕ್ರೀಡಾಕೂಟದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೊಲೀಸರ ಮಕ್ಕಳಿಗೆ ಎಲ್ಲಾ ರೀತಿಯ ಕ್ರೀಡೆಗಳನ್ನು ನಡೆಸಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿರುತ್ತಾರೆಂದರು. ಕ್ರೀಡಾಕೂಟದ ಅತ್ಯುತ್ತಮ ಪಾರಿತೋಷಕವನ್ನು ಡಿ.ಎ.ಆರ್. ಪೊಲೀಸ್ ತಂಡವು ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ ಆರ್.ಪಿ.ಐ. ವಿ. ಸೋಮಶೇಖರ್ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ, ಜನಾಕರ್ಷಕ ರೀತಿಯಲ್ಲಿ ಪಥಸಂಚಲನ ನಡೆಯಿತು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸರ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *