ಸೆ. ೨೦ಕ್ಕೆ ಪೊಲೀಸ್ ಸಿ.ಇ.ಟಿ. ಪರೀಕ್ಷೆಗೆ ಸರ್ವ ಸಿದ್ದ

ಸೆ. ೨೦ ಭಾನುವಾರದಂದು ನಡೆಯುವ ಪೊಲೀಸ್ ಸಿ.ಇ.ಟಿ. ಪರೀಕ್ಷೆಯ ನಿಮಿತ್ತ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಯುತ ಪರೀಕ್ಷೆಯನ್ನು ನಡೆಸಲು ಕೆಜಿಎಫ್ ಪೊಲೀಸ್ ಜಿಲ್ಲೆಯು ಸರ್ವ ಸಿದ್ದವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ತಿಳಿಸಿದರು.

ಅವರು ಕೆಜಿಎಫ್ ಉರಿಗಾಂನಲ್ಲಿನ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ, ಪರೀಕ್ಷಾ ಸಿಬ್ಬಂದಿಗಳ ಪೂರ್ವ ಸಿದ್ದತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ನಾಗರೀಕ ಪೊಲೀಸ್ ಕಾನ್ಸ್‌ಟೆಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಕೊಂಡಿರುವ ೨೫೦೦ ಮಂದಿ ಅಭ್ಯರ್ಥಿಗಳಿಗೆ ಪೊಲೀಸ್ ಸಿ.ಇ.ಟಿ. ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್ ೨೦ರ ಭಾನುವಾರ ಬೆಳಿಗ್ಗೆ ೧೧ ರಿಂದ ೧೨.೩೦ರ ವರೆಗೆ ರಾಬರ್ಟ್‌ಸನ್‌ಪೇಟೆಯಲ್ಲಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜ್ ಮತ್ತು ಉರಿಗಾಂನಲ್ಲಿನ ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಕಕಾಲದಲ್ಲಿ ನಡೆಸಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ವಿವರಿಸಿದರು.

ಪರೀಕ್ಷೆಯನ್ನು ಮುಕ್ತವಾಗಿ, ಶಾಂತಿಯುತವಾಗಿ, ನಿಸ್ಪಕ್ಷಪಾತವಾಗಿ ನಡೆಸುವ ಸಲುವಾಗಿ ಪರೀಕ್ಷಾ ಬಂದೋಬಸ್ತಿಗಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸ್ ನೇಮಕಾತಿ ಪ್ರಾಧಿಕಾರದ ನೀತಿ ಸಂಹಿತೆ, ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪರೀಕ್ಷೆಗೆ ನಿಯೋಜಿಸಲ್ಪಟ್ಟಿರುವ ಎಲ್ಲಾ ಪರಿವೀಕ್ಷಕರಿಗೆ, ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದು, ಯಾವುದೇ ಪೊಲೀಸ್ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲೀ, ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕರು, ಸಂವೀಕ್ಷಕರುಗಳು ಯಾವುದೇ ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳದಂತೆ, ನಿಸ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ, ತಪ್ಪಿದ್ದಲ್ಲಿ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂದು ಎಸ್‌ಪಿ ಇಲಕ್ಕಿಯಾ ಕರುಣಾಕರನ್ ಅವರು ಎಚ್ಚರಿಸಿದರು.

ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಹಾಗೂ ಕೋವಿಡ್-೧೯ ಪ್ರಯುಕ್ತ ಮುನ್ನೆಚ್ಚರಿಕೆಗಾಗಿ ಕಟ್ಟುನಿಟ್ಟಿನ ಕ್ರಮವಿಡಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರವೇಶದ್ವಾರದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪ್ರವೇಶಿಸುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಮೊಬೈಲ್ ಪೋನ್, ಕ್ಯಾಲ್ಕುಲೇಟರ್, ಟ್ಯಾಬ್, ಮಾರಣಾಯುಧಗಳನ್ನು ಯಾರೂ ಪರೀಕ್ಷಾ ಸ್ಥಳಗಳಲ್ಲಿ ಕೊಂಡೊಯ್ಯದಂತೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ನಿಗಾ ಇಡಲು ಸೂಚಿಸಲಾಗಿದೆ. ಸಮಾಜಗಾತುಕ ಶಕ್ತಿಗಳು, ರೌಡಿ, ಗೂಂಡಾ ಪಟ್ಟಿಯಲ್ಲಿರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಯಾವುದೇ ರೀತಿಯ ಕಾನೂನು ಬಾಹಿರ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ದ ತಕ್ಷಣವೇ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಪರೀಕ್ಷಾ ಸಿಬ್ಬಂದಿಗಳು ನಿರ್ಭಯದಿಂದ ಪರೀಕ್ಷಾ ಕರ್ತವ್ಯ ನಿರ್ವಹಿಸಬಹುದು ಹಾಗೂ ಅಭ್ಯರ್ಥಿಗಳು ನಿರ್ಭಿತಿಯಿಂದ ಪರೀಕ್ಷೆಯನ್ನು ಬರೆಯಬಹುದೆಂದು ಎಸ್‌ಪಿ ಇಲಕ್ಕಿಯಾ ಕರುಣಾಕರನ್ ಅವರು ಕರೆ ನೀಡಿದರು.

ಸಭೆಯಲ್ಲಿ ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ನಾಗರಾಜ್, ಉಪ ಪ್ರಾಂಶುಪಾಲೆ ಶೋಭ ಪರಮೇಶ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೇಶವಮೂರ್ತಿ, ಜೈನ್ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಜಯಪಾಂಡ್ಯನ್, ಡಿವೈಎಸ್‌ಪಿ ಬಿ.ಕೆ. ಉಮೇಶ್, ಶಿಕ್ಷಣಾಧಿಕಾರಿ ಎಫ್.ಎಂ. ಅಶ್ವಥ್ ಉಪಸ್ಥಿತರಿದ್ದರು.

ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸೂರ್ಯಪ್ರಕಾಶ್, ತಬರೇ ಆಲಂ ಪಾಷ, ವೆಂಕಟೇಶಮೂರ್ತಿ, ಸುನಿಲ್‌ಕುಮಾರ್, ಜಿ.ಪಿ.ರಾಜು, ವೆಂಕಟರವಣಪ್ಪ, ಮುಸ್ತಾಕ್‌ಪಾಷ, ಶಿವರಾಜ್ ಮುಧೋಳ್, ಆರ್‌ಪಿಐ ಟಿ.ಮಂಜುನಾಥ ಸೇರಿದಂತೆ ಜಿಲ್ಲೆಯ ಪಿಎಸ್‌ಐಗಳು ಹಾಜರಿದ್ದರು.

Leave a Reply

Your email address will not be published. Required fields are marked *