ಪೊಲೀಸ್ ಕುಟುಂಬದವರ ಸ್ನೇಹ ಸಮ್ಮೀಲನ ಕಾರ್ಯಕ್ರಮ

ಕೆಜಿಎಫ್ ಪೊಲೀಸ್ ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಮತ್ತು ಪೊಲೀಸ್ ಕುಟುಂಬದವರ ಸ್ನೇಹ ಸಮ್ಮೀಲನ ಕಾರ್ಯಕ್ರಮವನ್ನು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಅಧೀಕ್ಷಕಾರದ ಶ್ರೀ. ಕಾರ್ತಿಕ್‌ರೆಡ್ಡಿ, ಐ.ಪಿ.ಎಸ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ದಿನಾಂಕ 17.05.2019 ರಂದು ಸಂಜೆ ಕೆಜಿಎಫ್ನ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ಹಾಸ್ಯೋತ್ಸವ ಏರ್ಪಡಿಸಲಾಗಿತ್ತು. ಸ್ನೇಹ ಸಮ್ಮೀಲನ ಕಾರ್ಯಕ್ರಮದ ಅಂಗವಾಗಿ ಡಿಎಆರ್ ಮೈದಾನವನ್ನು ವರ್ಣರಂಜಿತ ದೀಪಾಲಂಕರಣಗಳಿಂದ, ಹಸಿರು ತೋರಣಗಳಿಂದ ಅಲಂಕರಿಸಲಾಗಿತ್ತು, ಡಿಎಆರ್ ಸುತ್ತಮುತ್ತಲು ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.
ಸದಾ ಕೆಲಸದ ಒತ್ತಡದ ಮೇಲೆ ಇರುವಂತಹ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಮನೋಲ್ಲಾಸಕ್ಕಾಗಿ ತಂತಮ್ಮ ಕುಟುಂಬವರ್ಗದವರ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶವನ್ನು ಕಲ್ಪಿಸುವ ದಿಸೆಯಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒಂದೆಡೆ ಸೇರುವ ಮೂಲಕ ಉತ್ತಮ ಭಾಂದವ್ಯ ಬೆಸೆಯಲು ಸ್ನೇಹ ಸಮ್ಮೀಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆ ಕ್ರಿಕೇಟ್ ಪಂದ್ಯಾವಳಿಯು ಅಧಿಕಾರಿ, ಸಿಬ್ಬಂದಿಗಳಿಂದ ನಡೆಯಿತು, ಸಂಜೆ ಪೊಲೀಸರ ಮತ್ತು ಪೊಲೀಸರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಹೆಸರಾಂತ ಹಾಸ್ಯ ಕಲಾವಿದ ರಿಚ್ಚರ್ಡ್‌ಲೂಯಿಸ್, ಮೈಸೂರು ಆನಂದ್ ಕಲಾ ತಂಡದವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಪೊಲೀಸ್ ಕುಟುಂಬದವರ ಸ್ನೇಹ ಸಮ್ಮೀಲನದ ಕಾರ್ಯಕ್ರಮದಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಪೊಲೀಸ್ ಕುಟುಂಬ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣಕರ್ತರಾಗಿರುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರಿಗೆ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಅಧೀಕ್ಷಕಾರದ ಶ್ರೀ. ಕಾರ್ತಿಕ್‌ರೆಡ್ಡಿ, ಐ.ಪಿ.ಎಸ್ ಅವರು ಬಹುಮಾನಗಳನ್ನು ವಿತರಿಸಿದರು.

Leave a Reply

Your email address will not be published. Required fields are marked *