ಪತ್ರಿಕಾ ಪ್ರಕಟಣೆ

ಕೆಜಿಎಫ್ : ವೈದ್ಯರ ಸಂಘದಿಂದ ಪೊಲೀಸರಿಗೆ ಮಾಸ್ಕ್, ಕಿಟ್ ವಿತರಣೆ

ಭಾರತೀಯ ವೈದ್ಯಕೀಯ ಸಂಘ ಹಾಗೂ ಕೆಜಿಎಫ್ ಖಾಸಗಿ ವೈದ್ಯರ ಸಂಘದ ವತಿಯಿಂದ ಕೆಜಿಎಫ್‌ನ ಸಮಸ್ತ ಪೊಲೀಸರಿಗೆ ಫೇಸ್ ಮಾಸ್ಕ್, ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶನಿವಾರದಂದು ಸಂಜೆ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ೮೦೦ ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ವೈದ್ಯರುಗಳ ಸಂಘದಿಂದ ಉಚಿತವಾಗಿ ಫೇಸ್ ಶೀಲ್ಡ್ ಮಾಸ್ಕ್, ಪಿಪಿಇ ಕಿಟ್ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಫ್ಯಾನ್ಸಿ ಮಾಸ್ಕ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೆಜಿಎಫ್ ಘಟಕದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ|| ಪರಮೇಶ್ವರಪ್ಪ ಹಾಗೂ ಕೆಜಿಎಫ್ ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ಡಾ|| ಮಂಜುನಾಥ ಅವರುಗಳು ನೇತೃತ್ವ ವಹಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಹೃದಯ ತಜ್ಞ ಡಾ|| ಬಿ.ರಾಜೇಂದ್ರಕುಮಾರ್, ಡಾ|| ವಿಜಯಕುಮಾರ್, ಡಾ|| ರಘುನಾಥ, ರೋಟರಿ ಸಂಸ್ಥೆಯ ರಾಜು ಅವರುಗಳು ಭಾಗವಹಿಸಿದ್ದರು. ಕೊರೊನಾ ಬಂದೋಬಸ್ತು ಕರ್ತವ್ಯಗಳಲ್ಲಿ ಹಗಲಿರುಳು ದುಡಿಯುತ್ತಿರುವ ಪೊಲೀಸರಿಗೆ ತಮ್ಮ ಕೈಲಾದಷ್ಟು ಕನಿಷ್ಠ ಸಹಾಯವನ್ನು ವೈದ್ಯರ ಸಂಘದಿಂದ ಮಾಡಲಾಗುತ್ತಿದೆಯೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರುಗಳು, ಕೊರೊನಾ ವೈರಸ್ ಹರಡುವಿಕೆಯ ವಿರುದ್ದ ಹೋರಾಡಲು ಪ್ರತಿಯೊಬ್ಬರು ಸಹಕರಿಸಬೇಕಿದ್ದು, ಈ ಸಂಬಂಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ನಡೆಸಿಕೊಡಲಾಗುತ್ತಿದೆ. ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಲು, ಸಾಬೂನಿನಿಂದ ಆಗಾಗ್ಗೆ ಕೈತೊಳೆಯಲು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು, ಅನಾವಶ್ಯಕ ಓಡಾಡ ಮಾಡದಿರಲು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಮಾತನಾಡಿ, ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕೋವಿಡ್-೧೯ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರವು ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಕೆಜಿಎಫ್ ಪೊಲೀಸ್ ಜಿಲ್ಲೆಯಾದ್ಯಂತ ಲಾಕ್‌ಡೌನ್‌ನ್ನು ವ್ಯವಸ್ಥಿತವಾಗಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಪ್ರತಿಯೊಬ್ಬರು ಮಾಸ್ಕ್‌ನ್ನು ಬಳಸಬೇಕೆಂದು ಕರೆ ನೀಡಿದರು.
ಅಲ್ಲದೆ, ಕಾನೂನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಇನ್ನು ಮುಂದೆಯೂ ಸಹ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿನ ಎಲ್ಲಾ ನಾಗರೀಕರು ಜವಾಬ್ದಾರಿಯುತವಾಗಿ ನಡೆದುಕೊಂಡು, ಅನಾವಶ್ಯಕ ಓಡಾಟಕ್ಕೆ ಆಸ್ಪದ ನೀಡಬಾರದು, ವಿನಾಕಾರಣ ವಾಹನಗಳಲ್ಲಿ ಓಡಾಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ಆದೇಶಕ್ಕೆ ಬದ್ದರಾಗಿ ಮನೆಯಲ್ಲಿಯೇ ಇದ್ದು ಸುರಕ್ಷಿತರಾಗಿರಲು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಿ.ಕೆ.ಉಮೇಶ, ಇನ್ಸ್‌ಪೆಕ್ಟರ್‌ಗಳಾದ ಬಿ.ಎನ್.ಶ್ರೀಕಂಠಯ್ಯ, ವೆಂಕಟರಮಣಪ್ಪ, ಶಿವರಾಜ್ ಮುಧೋಳ್, ರಾಜು, ಟಿ.ಮಂಜುನಾಥ ಇತರರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *