ಪತ್ರಿಕಾ ಪ್ರಕಟಣೆ: ಸಿವಿಲ್ ಪೊಲೀಸ್ ಲಿಖಿತ ಪರೀಕ್ಷೆ ಯಶಸ್ವಿ

ದಿನಾಂಕ 20.09.2020, ಭಾನುವಾರದಂದು ಸಿವಿಲ್ ಪೊಲೀಸ್ ಹುದ್ದೆಯ ಸಿ.ಇ.ಟಿ. ಪರೀಕ್ಷೆಯನ್ನು ಮುಕ್ತವಾಗಿ, ಸಂಪೂರ್ಣ ಶಾಂತಿಯುತವಾಗಿ, ಯಶಸ್ವಿಯಾಗಿ ನಡೆಸಲಾಗಿದೆ.

ಬೆಳಿಗ್ಗೆ 11.00 ರಿಂದ 12.30 ರ ವರೆಗೆ ಉರಿಗಾಂನಲ್ಲಿನ ಕೆಜಿಎಫ್ ಪ್ರಥಮ ದರ್ಜೆ ಕಾಲೇಜ್ ಮತ್ತು ಕೆಜಿಎಫ್ನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಏಕಕಾಲದಲ್ಲಿ ನಡೆಸಿದ ಸಿವಿಲ್ ಪೊಲೀಸ್ ಸಿ.ಇ.ಟಿ. ಲಿಖಿತ ಪರೀಕ್ಷೆಯನ್ನು ನಡೆಸಲಾಗಿದೆ.

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿ ಇರುವ ನಾಗರೀಕ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗೆ ಅರ್ಹರಾಗಿರುವ 2363 ಮಂದಿ ಅಭ್ಯರ್ಥಿಗಳಿಗೆ, ಪ್ರಸ್ತುತ ಪೊಲೀಸ್ ಸಿ.ಇ.ಟಿ. ಲಿಖಿತ ಪರೀಕ್ಷೆಯನ್ನು ಏರ್ಪಡಿಸಿದ್ದು, 364 ಮಂದಿ ಗೈರುಹಾಜರಿಯಾಗಿದ್ದು, ಒಟ್ಟು 1999 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು.

 

ಪರೀಕ್ಷೆಯನ್ನು ಮುಕ್ತವಾಗಿ, ಶಾಂತಿಯುತವಾಗಿ, ನಿಸ್ಪಕ್ಷಪಾತವಾಗಿ ನಡೆಸುವ ಸಂಬಂಧ ಕಾಲೇಜಿನ ಸರಹದ್ದಿನಲ್ಲಿ ಸರ್ಪಗಾವಲಿನ ಬಿಗಿ ಪೊಲೀಸ್ ಬಂದೋಬಸ್ತಿನ ಮಧ್ಯೆ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಮೊಬೈಲ್ ಪೋನ್, ಕ್ಯಾಲ್ಕುಲೇಟರ್, ಟ್ಯಾಬ್, ಕ್ಯಾಮೆರಾ, ಮಾರಣಾಯುಧಗಳನ್ನು ಯಾರೂ ಕೊಂಡೊಯ್ಯದಂತೆ, ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು, ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸುವ ಸಂಬಂಧ ಬಾಂಬ್ ನಿಷ್ಕ್ರಿಯ ದಳವನ್ನು ಸಹ ನಿಯೋಜಿಸಲಾಗಿತ್ತು. ಅಲ್ಲದೇ ಕೋವಿಡ್-೧೯ ವೈರಸ್ ರೋಗಾಣು ಹರಡುವಿಕೆಯಿಂದಾಗಿ ಪ್ರತಿಯೊಬ್ಬರನ್ನು ಸಹ ತಪಾಸಣೆಗೆ ಒಳಪಡಿಸಲಾಗಿತ್ತು.

ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಕೆಜಿಎಫ್ನ ಡಿವೈಎಸ್ಪಿ ಬಿ.ಕೆ. ಉಮೇಶ್ ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕ್ರಮವಿಡಲಾಗಿತ್ತು. ಪ್ರತಿ ಪರೀಕ್ಷಾ ಕೊಠಡಿಗಳಲ್ಲೂ ಇಬ್ಬರು ಪರಿವೀಕ್ಷಕರುಗಳು, ತಲಾ ಒಬ್ಬ ವಿಡಿಯೋ ಗ್ರಾಫರ್‌ಗಳಿದ್ದು, ಪರೀಕ್ಷಾ ಸಂಬಂಧ ಎಲ್ಲಾ ಕೊಠಡಿಗಳಲ್ಲಿ ಸಂಪೂರ್ಣ ವಿಡಿಯೋ ಚಿತ್ರಿಕರಿಸಲಾಗಿದೆ.  ಪರೀಕ್ಷಾ ಕೇಂದ್ರದಲ್ಲಿ ಕೆಜಿಎಫ್ನ ಡಿವೈಎಸ್ಪಿ ಬಿ.ಕೆ. ಉಮೇಶ್ ಮತ್ತು ಕೇಂದ್ರ ವಲಯ ಕಛೇರಿಯ ಡಿವೈಎಸ್ಪಿ ಬಿ.ಪಿ. ಪ್ರಸಾದ್ ಅವರುಗಳು ಉಸ್ತುವಾರಿ ವಹಿಸಿದ್ದು, ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ನಾಗರಾಜ್ ಮುಖ್ಯ ಪರಿವೀಕ್ಷಕರಾಗಿದ್ದು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ|| ಕೇಶವಮೂರ್ತಿ, ಜಯಪಾಂಡ್ಯನ್, ಶಿಕ್ಷಣ ಇಲಾಖೆಯ ನಿರೀಕ್ಷಕ ಎಫ್.ಎಂ. ಅಶ್ವಥ್, ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ ಮತ್ತಿತರರು ಮೇಲ್ವಿಚಾರಕರುಗಳಾಗಿ ಕಾರ್ಯನಿರ್ವಹಿಸಿದರು.  ಪರೀಕ್ಷೆಯ ಬಳಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಸೀಲ್ಡ್ ಕಿಟ್ ಬಾಕ್ಸ್‌ಗಳನ್ನು ಜಿಲ್ಲಾ ಪೊಲೀಸ್ ಕಛೇರಿಯ ಭದ್ರತಾ ಕೊಠಡಿಯಲ್ಲಿಟ್ಟು, ಸೂಕ್ತ ಭದ್ರತಾ ವ್ಯವಸ್ಥೆಯೊಂದಿಗೆ ಬೆಂಗಳೂರು ಪೊಲೀಸ್ ನೇಮಕಾತಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

 

Leave a Reply

Your email address will not be published. Required fields are marked *