ಪತ್ರಿಕಾ ಪ್ರಕಟಣೆ ದಿ:11-04-2019

ಏ.೧೮ರ ಚುನಾವಣೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ : ಐಜಿಪಿ ಶರತ್‌ಚಂದ್ರ

ಕೆಜಿಎಫ್., ಏ. ೧೧ :

ಏಪ್ರಿಲ್ ೧೮ ರಂದು ಗುರುವಾರ ನಡೆಯುವ ಲೋಕಸಭಾ ಚುನಾವಣೆಯ ನಿಮಿತ್ತ ಜಿಲ್ಲೆಯಾದ್ಯಂತ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಅವರು ಸೂಚಿಸಿದರು.

ಅವರು ಗುರುವಾರದಂದು ಕೆಜಿಎಫ್‌ಗೆ ಭೇಟಿ ನೀಡಿ, ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ, ಲೋಕಸಭಾ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿ, ಯಾವುದೇ ಪೊಲೀಸ್ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲೀ ಯಾವುದೇ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳಬಾರದು ಹಾಗೊಮ್ಮೆ ಎಲ್ಲಾದರೂ ದೂರು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಅವರು ಎಚ್ಚರಿಸಿದರು.

ಕೆಜಿಎಫ್ ಹಾಗೂ ಬಂಗಾರಪೇಟೆ ವಿಧಾನಸಭಾ ವ್ಯಾಪ್ತಿಯಲ್ಲಿ ಏನಾದರೂ ಕಾನೂನು ಬಾಹಿರ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರಿಗಿಸಬೇಕು, ಅಕ್ರಮ ಮದ್ಯ ಮಾರಾಟ ಹಾಗೂ ಹಂಚಿಕೆ ತಡೆಯುವಲ್ಲಿ ತಕ್ಷಣವೇ ಕಾರ್ಯಾಚರಣೆ ನಡೆಸಬೇಕೆಂದು ತಪ್ಪಿದ್ದಲ್ಲಿ ಅಂತಹ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವುದಾಗಿ ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಅವರು ಎಚ್ಚರಿಸಿದರು.

ಕೆಜಿಎಫ್ ಪೊಲೀಸ್ ಜಿಲ್ಲೆಯ ಸರಹದ್ದಿನಲ್ಲಿರುವ ಮತಗಟ್ಟೆಗಳ ಪೈಕಿ ಸೂಕ್ಷ್ಮ ಹಾಗೂ ಅತೀಸೂಕ್ಷ್ಮವೆಂದು ಗುರ್ತಿಸಿರುವ ಮತಗಟ್ಟೆಗಳಲ್ಲಿ ಮಾರಿಕುಪ್ಪಂ, ಚಾಂಫೀಯನ್‌ರೀಫ್ಸ್, ಆಂಡ್ರಸನ್‌ಪೇಟೆ, ರಾಬರ್ಟ್‌ಸನ್‌ಪೇಟೆ, ಬಂಗಾರಪೇಟೆ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿದ ಐಜಿಪಿ ಶರತ್‌ಚಂದ್ರ ಅವರು, ನ್ಯಾಯಸಮ್ಮತ ಹಾಗೂ ಮುಕ್ತ ರೀತಿಯಲ್ಲಿ ಚುನಾವಣೆ ನಡೆಯಲು ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಸಹಕರಿಸಬೇಕೆಂದು ಕರೆ ನೀಡಿದರು.

ಸಶಸ್ತ್ರ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಕೆ.ರಾಮಕೃಷ್ಣ ಮತ್ತು ಸಿಬ್ಬಂದಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಐಜಿಪಿ ಶರತ್‌ಚಂದ್ರ ಅವರಿಗೆ ಗೌರವ ರಕ್ಷೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಉಪಾಧೀಕ್ಷಕರಾದ ಪರಮೇಶ್ವರ ಹೆಗಡೆ, ಮನೋಜ್‌ಕುಮಾರ್ ನಾಯ್ಕ, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಎಲ್ಲಾ ಪಿ.ಎಸ್.ಐ.ಗಳು ಹಾಜರಿದ್ದರು.

ಚಿತ್ರ ಶಿರ್ಷಿಕೆ : ೧೧ಕೆಜಿಎಫ್೦೧ : ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಕೆಜಿಎಫ್‌ಗೆ ಭೇಟಿ ನೀಡಿದಾಗಿದ ಚಿತ್ರದಲ್ಲಿ ಎಸ್‌ಪಿ ಕಾರ್ತಿಕ್‌ರೆಡ್ಡಿ

Leave a Reply

Your email address will not be published. Required fields are marked *