ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬಿಳ್ಕೋಡುಗೆ

ಸೇವೆಯಲ್ಲಿರುವಾಗ ಪ್ರತಿಯೊಬ್ಬ ಸರ್ಕಾರಿ ನೌಕರರು ಉತ್ತಮವಾದ ಸೇವೆಯನ್ನು ಸಲ್ಲಿಸುವ ಮೂಲಕ, ಅವರ ಸೇವೆಯು ಮುಂದಿನ ಜನಾಂಗಕ್ಕೆ ಆದರ್ಶವಾಗುವ ಮೂಲಕ ಜನಸಾಮಾನ್ಯರ ಮನಗೆಲ್ಲುವ ಕಾರ್ಯ ಮಾಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಕರೆ ನೀಡಿದರು.

ಅವರು ಸೋಮವಾರದಂದು ಸಂಜೆ ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಉರಿಗಾಂ ಪೊಲೀಸ್ ಠಾಣೆಯ ಎಎಸ್‌ಐ ದೀನದಯಾಳ್‌ದೇವಕುಮಾರ್, ಎಆರ್‌ಎಸ್‌ಐ ಚೌಡಪ್ಪ, ದಲಾಯತ್ ಜಿ.ಗುರಮ್ಮ ಅವರುಗಳು ಆ.೩೧ ರಂದು ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಏರ್ಪಡಿಸಿದ್ದ, ಬಿಳ್ಕೋಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಎಸ್‌ಐ ದೀನದಯಾಳ್‌ದೇವಕುಮಾರ್, ಎಆರ್‌ಎಸ್‌ಐ ಚೌಡಪ್ಪ, ದಲಾಯತ್ ಜಿ.ಗುರಮ್ಮ ಅವರುಗಳು ಪೊಲೀಸ್ ಇಲಾಖೆಯ ವಿವಿಧ ವಿಭಾಗ, ಠಾಣೆಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸುವ ಮೂಲಕ ಯಶಸ್ವಿಯಾಗಿರುತ್ತಾರೆ. ಇವರ ಸೇವೆ, ಅನುಭವವು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು. ಉದ್ಯೋಗಿಗಳಿಗೆ ನಿವೃತ್ತಿಯು ಇದ್ದೇ ಇರುತ್ತದೆ, ಇರುವುದರೊಳಗೆ ಉತ್ತಮವಾದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂದರು. ನೈತಿಕ ಬೆಂಬಲದೊಂದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಕರೆ ನೀಡಿದರು.

ನಿವೃತ್ತರಾದ ಎಎಸ್‌ಐ ದೀನದಯಾಳ್‌ದೇವಕುಮಾರ್, ಎಆರ್‌ಎಸ್‌ಐ ಚೌಡಪ್ಪ, ದಲಾಯತ್ ಜಿ.ಗುರಮ್ಮ ಅವರುಗಳಿಗೆ ಶಾಲು ಹೊದಿಸಿ, ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಿ.ಕೆ.ಉಮೇಶ್, ಸಹಾಯಕ ಆಡಳಿತಾಧಿಕಾರಿ ಜಿ. ವಿಶ್ವನಾಥ, ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಪಿ.ರಾಜು, ಮುಸ್ತಾಕ್‌ಪಾಷ, ಆರ್‌ಪಿಐ ಟಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *